Republic Day 2024: ರಾಜ್ಯದ ಸ್ತಬ್ಧಚಿತ್ರ ನಿರಾಕರಿಸಿ ಕನ್ನಡಿಗರಿಗೆ ಅಪಮಾನ; ಕೇಂದ್ರದ ವಿರುದ್ಧ ಸಿಎಂ ಟೀಕೆ
Republic Day 2024: ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರು: ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ (Republic Day 2024) ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ (Tableau) ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು. ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರಿಸಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ಚೆನ್ನಮ್ಮ, ಬ್ರಾಂಡ್ ಬೆಂಗಳೂರು ಹಾಗೂ ಕರ್ನಾಟಕದ ನೈಸರ್ಗಿಕ ವ್ಯವಸ್ಥೆ ಸೇರಿ 4 ಸ್ತಬ್ಧಚಿತ್ರಕ್ಕೆ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ… ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ರಾಜ್ಯಕ್ಕೆ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ ಎಂದು ಕಿಡಿ ಕಾರಿದರು.
First Published on Vistara News.
.jpg)
Comments
Post a Comment