Archana Patil: ಕಾಂಗ್ರೆಸ್‌ಗೆ ಶಾಕ್, ಕೇಂದ್ರದ ಮಾಜಿ ಸಚಿವನ ಸೊಸೆ ಬಿಜೆಪಿ ಸೇರ್ಪಡೆ!
Archana Patil: ಡಾ.ಅರ್ಚನಾ ಪಾಟೀಲ್ ಚಕುರ್ಕರ್ ಅವರು ಕಳೆದ ಸೋಮವಾರವೇ ಬಿಜೆಪಿ ಸೇರಬೇಕಿತ್ತು. ಆದರೆ, ಮಗಳ ಮದುವೆ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯನ್ನು ಅವರು ಮುಂದೂಡಿದ್ದರು. ಇವರು ಡಾ.ಅರ್ಚನಾ ಪಾಟೀಲ್ ಅವರು ಲೈಫ್‌ಕೇರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್‌ಪರ್ಸನ್ ಆಗಿದ್ದಾರೆ. ಆದಾಗ್ಯೂ, ಬಿಜೆಪಿಯಲ್ಲಿ ಇವರಿಗೆ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ (Maharashtra) ಭಾರಿ ಹಿನ್ನಡೆಯಾಗಿದೆ. ಕೇಂದ್ರದ ಮಾಜಿ ಸಚಿವ, ಲೋಕಸಭೆ ಸ್ಪೀಕರ್, ಕಾಂಗ್ರೆಸ್ ನಾಯಕರೂ ಆದ ಶಿವರಾಜ್ ಪಾಟೀಲ್ ಅವರ ಸೊಸೆ ಡಾ.ಅರ್ಚನಾ ಪಾಟೀಲ್ ಚಕುರ್ಕರ್ (Dr Archana Patil Chakurkar) ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಡಾ.ಅರ್ಚನಾ ಪಾಟೀಲ್ ಚಕುರ್ಕರ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರ ಅಧಿಕೃತ ನಿವಾಸ ‘ಸಾಗರ್’ದಲ್ಲಿ ಡಾ.ಅರ್ಚನಾ ಪಾಟೀಲ್ ಚಕುರ್ಕರ್ ಅವರು ಬಿಜೆಪಿ ಸೇರಿದರು. ಇವರನ್ನು ದೇವೇಂದ್ರ ಫಡ್ನವಿಸ್ ಅವರು ಸ್ವಾಗತಿಸಿದರು. “ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ನಾರಿಶಕ್ತಿ ವಂದನ್ ಅಧಿನಿಯಮ ಯೋಜನೆಯನ್ನು ಮೆಚ್ಚಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಈ ಯೋಜನೆಯು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುತ್ತದೆ. ಮೋದಿ ಅವರ ನಾಯಕತ್ವವೂ ನನಗೆ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ಜನಪರವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

Comments
Post a Comment