Lok Sabha Election 2024: ಕೋಲಾರ ಟಿಕೆಟ್ ಮಿಸ್; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!
Lok Sabha Election 2024: ದೆಹಲಿಗೆ ದೌಡಾಯಿಸಿರುವ ಹಾಲಿ ಸಂಸದ ಮುನಿಸ್ವಾಮಿ, ಕೋಲಾರ ಕ್ಷೇತ್ರದ ಬಗ್ಗೆ ಜೆ.ಪಿ. ನಡ್ಡಾ ಬಳಿ ಚರ್ಚೆ ಮಾಡಿದ್ದಾರೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಹೈಕಮಾಂಡ್ ಬಳಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.
ನವ ದೆಹಲಿ/ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಸಮರ ಜೋರಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಪಕ್ಷಗಳು ಹೋರಾಟಕ್ಕೆ ಅಣಿಯಾಗಿವೆ. ಕಾಂಗ್ರೆಸ್ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆಯಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರವು (Kolara Lok Sabha Constituency) ಜೆಡಿಎಸ್ ಪಾಲಾಗಿದ್ದರಿಂದ ಹಾಲಿ ಸಂಸದ ಮುನಿಸ್ವಾಮಿಗೆ ಭಾರಿ ನಿರಾಸೆಯಾಗಿದೆ. ಅವರು ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿಯಾಗಿ ತಮ್ಮ ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ಅಲ್ಲದೆ, ಕೋಲಾರ ಲೋಕಸಭಾ ಕ್ಷೇತ್ರವು ಬಿಜೆಪಿಯದ್ದು, ಇದನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ (Radha Mohandas Agarwal), ಎಸ್. ಮುನಿಸ್ವಾಮಿ (S Muniswamy) ಬಿಜೆಪಿ ಕಾರ್ಯಕರ್ತರಾಗಿದ್ದು, ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ದೆಹಲಿಗೆ ದೌಡಾಯಿಸಿರುವ ಹಾಲಿ ಸಂಸದ ಮುನಿಸ್ವಾಮಿ, ಕೋಲಾರ ಕ್ಷೇತ್ರದ ಬಗ್ಗೆ ಜೆ.ಪಿ. ನಡ್ಡಾ ಬಳಿ ಚರ್ಚೆ ಮಾಡಿದ್ದಾರೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಡಿ. ಅವಿಭಜಿತ ಕೋಲಾರ ಕ್ಷೇತ್ರದಲ್ಲಿ ಎಲ್ಲ ಜೆಡಿಎಸ್ ಶಾಸಕರು ಇದ್ದರೂ ಕಳೆದ ಬಾರಿ ಎಂಪಿ ಸ್ಥಾನವನ್ನು ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿಯೂ (Lok Sabha Election 2024) ಬಿಜೆಪಿಗೆ ಗೆಲ್ಲಲು ಹೆಚ್ಚು ಅವಕಾಶಗಳು ಇವೆ. ಕ್ಷೇತ್ರದಲ್ಲಿ ನಾನು ಜನರ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಲ್ಲದೆ, ಎಸ್‌ಸಿ ಸಮುದಾಯದವರ ಬಲ ಇದೆ. ದಕ್ಷಿಣ ಭಾರತದಲ್ಲಿ ಈ ಮಟ್ಟಿನ ಬಲ ಇರುವುದು ನಮ್ಮ ಕ್ಷೇತ್ರದಲ್ಲಿ ಮಾತ್ರ. ಹಾಗಾಗಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂದು ನಡ್ಡಾರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ (ಮಾ. 22) ರಾತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಅಲ್ಲಿ ಅವರನ್ನು ಯಾವ ರೀತಿ ಮನವೊಲಿಸಲಾಗಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

Comments
Post a Comment