Lok Sabha Election 2024: ಹಾಸನದಲ್ಲಿ ಮೈತ್ರಿ ಸಮನ್ವಯ ಸಭೆ; ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ರಾಧಾಮೋಹನ್ ದಾಸ್ ಕಸರತ್ತು
Lok Sabha Election 2024: ಪ್ರೀತಂಗೌಡ ಅವರು ಮೈಸೂರಿನ ಚುನಾವಣಾ ಪ್ರಭಾರಿಯಾಗಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.
ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟ ದಿನದಿಂದ ಜಿಲ್ಲೆಯಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಹೀಗಾಗಿ ಭಿನ್ನಮತ ಶಮನಗೊಳಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಶನಿವಾರ ಮೈತ್ರಿ ಸಮನ್ವಯ ಸಭೆ ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ಕಸರತ್ತು ನಡೆಸಿದ್ದು, ಚುನಾವಣೆಯಲ್ಲಿ (Lok Sabha Election 2024) ಮೈತ್ರಿ ಅಭ್ಯರ್ಥಿ ಗೆಲುವಿಗೆ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲು ಸೂಚಿಸಿದ್ದಾರೆ.
ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬಿಜೆಪಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಉಪಸಭಾಪತಿ ಪ್ರಾಣೇಶ್ ಭಾಗಿಯಾಗಿದ್ದರು.
ತುರ್ತು ಸಮನ್ವಯ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಬಿಜೆಪಿ-ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ 28ಕ್ಕೆ 28 ಸೀಟ್ ಗೆಲ್ಲುತ್ತೆ ಎಂದು ಗ್ಯಾರಂಟಿ ಕೊಡುತ್ತೀನಿ. ನಮಗೆ ಹಾಸನ ಎಷ್ಟು ಮುಖ್ಯವೋ ಮೈಸೂರು ಅಷ್ಟೇ ಮುಖ್ಯ. ಅಲ್ಲಿ ಯದುವೀರ್ ಅವರನ್ನು ನಿಲ್ಲಿಸಿದ್ದೇವೆ. ನಮ್ಮ ಮಾಜಿ ಶಾಸಕರು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಪ್ರತಿದಿನ ಹಾಸನದಲ್ಲೇ ಇರಬೇಕು ಎಂದು ನಿರೀಕ್ಷಿಸುವುದಿಲ್ಲ. ಅವರು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
First Published on Vistara News.

Comments
Post a Comment